ಮಂಗಳೂರು: ಆರ್ಥಿಕ ಸಮಸ್ಯೆಯಿಂದ ನೊಂದು ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಕೋಡಿಕಲ್‌ನಲ್ಲಿ ನಡೆದಿದೆ.
ಕೋಡಿಕಲ್ ನಿವಾಸಿ ನಿಖಿಲ್ ಪೂಜಾರಿ (30) ಆತ್ಮಹತ್ಯೆ ಮಾಡಿಕೊಂಡ ಯುವಕ.
ಘಟನೆ ವಿವರ
ಸೋಮವಾರ ಬೆಳಗ್ಗೆ ತನ್ನ ಮನೆಯಲ್ಲಿ ಉಪಹಾರ ಸೇವಿಸಿದ ನಿಖಿಲ್ ಪೂಜಾರಿ ಕೋಣೆ ಸೇರಿದ್ದ. ಸಂಜೆಯವರೆಗೆ ಮಲಗುವ ಅಭ್ಯಾಸ ರೂಢಿಸಿಕೊಂಡಿದ್ದ ಕಾರಣ ಮನೆಮಂದಿ ನಿಖಿಲ್ ಪೂಜಾರಿಯ ಬಗ್ಗೆ ಹೆಚ್ಚಿನ ಗಮನ ಹರಿಸಿರಲಿಲ್ಲ ಎನ್ನಲಾಗಿದೆ. ಸಂಜೆ ಬಳಿಕ ಬಾಗಿಲು ಬಡಿದರೂ ತೆಗೆಯದ್ದರಿಂದ ಫೋನ್ ಕರೆ ಮಾಡಿದರೂ ಆತ ಫೋನ್ ಕರೆ ಸ್ವೀಕರಿಸಿರಲಿಲ್ಲ.
ಹಾಗಾಗಿ ರಾತ್ರಿ 8:15ರ ವೇಳೆಗೆ ಬಾಗಿಲಿನ ಎಡೆಯಿಂದ ಗಮನಿಸಿದಾಗ ನಿಖಿಲ್ ಆತ್ಮಹತ್ಯೆ ಮಾಡಿರುವುದು ಗಮನಕ್ಕೆ ಬಂದಿದೆ. ತಕ್ಷಣ ಬಾಗಿಲು ಒಡೆದು ನುಗ್ಗಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂತು. ಬೇರೆ ಬೇರೆ ಆ್ಯಪ್‌ಗಳಲ್ಲಿ ನಿಖಿಲ್ ಸಾಲ ಪಡೆದಿದ್ದು, ಇದರಿಂದ ಆರ್ಥಿಕ ಸಮಸ್ಯೆಗೊಳಗಾಗಿದ್ದ.
ತಾಯಿಗೆ ಆರೋಗ್ಯ ಸರಿಯಿಲ್ಲವೆಂದು ಒಂದು ವಾರದಿಂದ ಕೆಲಸಕ್ಕೂ ರಜೆ ಹಾಕಿದ್ದ ಎನ್ನಲಾಗಿದೆ. ಈ ಬಗ್ಗೆ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.