canaratvnews

*ಮಹಿಳೆ ವಿದ್ಯಾವಂತಳಾದರೆ ಇಡೀ ಸಮಾಜಕ್ಕೇ ಬೆಳಕು: ಕೆ.ಎನ್. ಗಂಗಾಧರ ಆಳ್ವ*

ಮಂಗಳೂರು: “ಒಬ್ಬ ಮಹಿಳೆ ಶಿಕ್ಷಣ ಪಡೆದರೆ ಇಡೀ ಕುಟುಂಬ ಹಾಗೂ ಇಡೀ ಸಮಾಜವನ್ನೇ ವಿದ್ಯಾವಂತರನ್ನಾಗಿ ಮಾಡಲು ಸಾಧ್ಯ. ಕಲಿತ ವಿದ್ಯೆಗೆ ಕೊನೆಯಿಲ್ಲ, ಅದು ನಮ್ಮನ್ನು ಸದಾ ಸಂತೋಷದಿಂದ ಇರುವಂತೆ ಮಾಡುತ್ತದೆ,” ಎಂದು ಬಂಟ್ವಾಳದ ಎಸ್.ವಿ.ಎಸ್. ಟೆಂಪಲ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಕೆ.ಎನ್. ಗಂಗಾಧರ ಆಳ್ವ ಅವರು ಅಭಿಪ್ರಾಯಪಟ್ಟರು.

ಅಮೃತ ಪ್ರಕಾಶ ಪತ್ರಿಕೆ ಹಾಗೂ ಬಲ್ಮಠದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಜಂಟಿ ಆಶ್ರಯದಲ್ಲಿ ಏಪ್ರಿಲ್ 6 ರಂದು ಕಾಲೇಜಿನ ಸಭಾಂಗಣದಲ್ಲಿ ನಡೆದ ‘118ನೇ ಸಾಹಿತ್ಯ ಅಭಿರುಚಿ’ ಕಾರ್ಯಕ್ರಮದಲ್ಲಿ ಅವರು ಮುಖ್ಯ ಸಂಪನ್ಮೂಲ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ ಅವರು, “ವಿದ್ಯಾರ್ಥಿಗಳು ಸಾಹಿತ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ಪತ್ರಿಕೆ ಮತ್ತು ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡರೆ ನಿಮ್ಮ ಭವಿಷ್ಯ ಉಜ್ವಲವಾಗುತ್ತದೆ. ಇಂದಿನ ಕಾಲಘಟ್ಟದಲ್ಲಿ ಮೊಬೈಲ್ ಬಳಕೆಯನ್ನು ಮಿತವಾಗಿರಿಸಿ, ಜ್ಞಾನಾರ್ಜನೆಯತ್ತ ಒಲವು ತೋರಿ,” ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಗೋಪಾಲಕೃಷ್ಣ ಕೆ. ವಹಿಸಿದ್ದರು. ಅತಿಥಿಗಳಾಗಿ ಮಂಗಳೂರಿನ ಶಾರದಾ ಪಿ.ಯು. ಕಾಲೇಜಿನ ಉಪ ಪ್ರಾಂಶುಪಾಲರಾದ ಅರುಣ ಕುಮಾರಿ ಕೆ. ಹಾಗೂ ವಿಜಯ ಕರ್ನಾಟಕ ದೈನಿಕ ಪತ್ರಿಕೆಯ ಪ್ರಧಾನ ವರದಿಗಾರರಾದ ಮುಹಮ್ಮದ್ ಆರಿಫ್ ಪಡುಬಿದ್ರೆ ಉಪಸ್ಥಿತರಿದ್ದು ಶುಭ ಹಾರೈಸಿದರು.

ಅಮೃತ ಪ್ರಕಾಶ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಮಾಲತಿ ಶೆಟ್ಟಿ ಮಾಣೂರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ನಿವೃತ್ತ ಶಿಕ್ಷಕಿ ಹಾಗೂ ಲೇಖಕಿ ಸುಧಾ ನಾಗೇಶ್ ಕಾರ್ಯಕ್ರಮ ನಿರ್ವಹಿಸಿದರು. ಕನ್ನಡ ಶಿಕ್ಷಕಿ ವಿಜಯಲಕ್ಷ್ಮಿ ವಂದಿಸಿದರು.

Share News
Exit mobile version