ಪೆರುವಾಯಿ/ವಿಟ್ಲ, ಎ.19: ಕರಾವಳಿಯಲ್ಲಿ ಕ್ರೈಸ್ತರು ಶನಿವಾರದಂದು ಕ್ರಿಸ್ತರು ಮರಣ ಗೆದ್ದು ಪುನರುತ್ಥಾನರಾದ ಹಬ್ಬವಾದ ಈಸ್ಟರ್ ಹಬ್ಬವನ್ನು ಭಕ್ತಿ, ಶ್ರದ್ಧೆ ಹಾಗೂ ಸಡಗರದಿಂದ ಆಚರಿಸಿದರು. ಚರ್ಚ್ ಗಳಿಗೆ ತೆರಳಿದ ಕ್ರೈಸ್ತರು ವಿವಿಧ ಧಾರ್ಮಿಕ ವಿಧಿಗಳಲ್ಲಿ ಭಾಗವಹಿಸಿದರು. ಗುರುವಾರ ಬಳಿಕ ಶನಿವಾರದಂದು ಬಲಿಪೂಜೆಗಳು ಆರಂಭಗೊಂಡವು. ಘಂಟೆಗಳು ಮೊಳಗಿದವು.

ಪೆರುವಾಯಿ ಫಾತಿಮಾ ಮಾತೆಯ ಇಗರ್ಜಿಯಲ್ಲಿ ಫಾ. ಸೈಮನ್ ಡಿಸೋಜಾ ನೇತೃತ್ವದಲ್ಲಿ ಈಸ್ಟರ್ ಆಚರಿಸಲಾಯಿತು. ಚರ್ಚ್ ಆವರಣದಲ್ಲಿ ಬೆಂಕಿ ಆಶಿರ್ವಚನ ಹಾಗೂ ಮೊಂಬತ್ತಿ ಮೆರವಣಿಗೆ ನಡೆಯಿತು. ಬಳಿಕ ಚರ್ಚ್ ನಲ್ಲಿ ಸ್ತೋತ್ರ ಹಾಡಲಾಯಿತು. ಹಳೆ ಹಾಗೂ ಹೊಸ ಒಡಂಬಡಿಕೆಯ ಆಯ್ದ ದೇವರ ವಾಕ್ಯ ವಾಚನ, ಕೀರ್ತನೆ ಗಾಯನ ಹಾಗೂ ಧರ್ಮಗುರುಗಳಿಂದ ಪ್ರವಚನ ನಡೆಯಿತು. ಪವಿತ್ರಸ್ನಾನದ ಪ್ರತಿಜ್ಞೆ ನವೀಕರಿಸಲಾಯಿತು. ಪವಿತ್ರ ಜಲ ಆಶೀರ್ವದಿಸಲಾಯಿತು. ಧಾರ್ಮಿಕ ವಿಧಿಯಲ್ಲಿ ನೂರಾರು ಮಂದಿ ಭಾಗವಹಿಸಿದ್ದರು. ಉಪಾಧ್ಯಕ್ಷ ಡೆನಿಸ್ ಮೊಂತೇರೊ, ಕಾರ್ಯದರ್ಶಿ ವೈಲೆಟ್ ಕುವೆಲ್ಲೊ ಇದ್ದರು.
ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಅತೀ ವಂದನೀಯ ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ರೊಸಾರಿಯೊ ಕ್ಯಾಥೆಡ್ರಲ್ ನಲ್ಲಿ ಬಲಿಪೂಜೆ ನೆರವೇರಿಸಿದರು.